ಕ್ರೌಸ್, ಕಾರ್ಲ್ 		
1874-1936. ಆಸ್ಟ್ರಿಯದ ಪತ್ರಿಕೋದ್ಯಮಿ, ವಿಮರ್ಶಕ, ಪ್ರಬಂಧಕಾರ ಮತ್ತು ಕವಿ. ಚೆಕಸ್ಲೊವಾಕಿಯಾದ ಜಿಸಿನ್ ನಗರದಲ್ಲಿ ಜನಿಸಿದ ಈತ ವಿಯನ್ನ ವಿಶ್ವವಿದ್ಯಾಲಯದಲ್ಲಿ ಓದಿ ತನ್ನ ಜೀವಿತದ ಬಹುಭಾಗವನ್ನು ಅಲ್ಲಿಯೇ ಕಳೆದ. ಹಲವು ವರ್ಷಗಳ ಕಾಲ ಪತ್ರಿಕೋದ್ಯಮಿಯಾಗಿ ದುಡಿದ ಅನಂತರ ಡೀ ಫಾಕೆಲ್ (ಸ್ಪರ್ಶತೆ) ಎಂಬ ನಿಯತಕಾಲಿಕೆಯನ್ನು ಸ್ಥಾಪಿಸಿ (1899) ಆಸ್ಟ್ರಿಯನ್ ಸಮಾಜದಲ್ಲಿ ಮಧ್ಯವರ್ಗದ ಧನಿಕರನ್ನು ಟೀಕಿಸಿದ. ರಾಷ್ಟ್ರೀಯ ಸಮಾಜವಾದಿ ಪಂಥದ ಬೆಳೆವಣಿಗೆಯಿಂದ ಈ ಪತ್ರಿಕೆ ನಿಂತುಹೋಯಿತು (1936). ಪತ್ರಿಕೋದ್ಯಮಿಯಾಗಿ ಉತ್ತಮ ಆಸ್ಟ್ರಿಯನ್ ಸಂಸ್ಕøತಿ ಸಂಪ್ರದಾಯಗಳನ್ನು ಉಳಿಸಿಕೊಂಡು ಬರುವಂತೆ ಕ್ರೌಸ್ ಜನಕ್ಕೆ ಮನವಿ ಮಾಡಿದ. ಆಸ್ಟ್ರಿಯದ ಸಮಾಜ ಹಾಗೂ ಐರೋಪ್ಯ ಪದ್ಧತಿಗಳ ಶೈಥಿಲ್ಯದ ವಿರುದ್ಧ ಸೆಣಸಿದ. ಒಂದನೆಯ ಮಹಾಯುದ್ಧದ ಕಾಲದಲ್ಲಿ ಸೇನಾಪ್ರವೃತ್ತಿಯನ್ನು ವಿರೋಧಿಸಿದ. ಈತನ ಯುದ್ಧವಿರೋಧಿ ನಾಟಕ ಡೀ ಲೆಟ್ಸೆನ್ ಟಾಗೆ ಡೆರ್ ಮೆನ್ಷ್‍ಹೈಟ್ (ಮಾನವ ಜನಾಂಗದ ಕೊನೆಯ ದಿನಗಳು)-1918-22ರಲ್ಲಿ ಬೆಳಕಿಗೆ ಬಂತು. ವಿಡಂಬನೆಯಲ್ಲಿ ಈತನನ್ನು ಇಂಗ್ಲಿಷ್ ಸಾಹಿತ್ಯದ ಜೊನಾಥನ್ ಸ್ಟಿಫ್ಟ್ ಹಾಗೂ ಲ್ಯಾಟಿನ್ ಸಾಹಿತ್ಯದ ಜುವೆನಲ್ ಇವರುಗಳಿಗೆ ಹೋಲಿಸುತ್ತಾರೆ. 		(ಟಿ.ವಿ.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ